2009/11/20

ಪಯಣ

ಕಣ್ಣೆದುರಿಗೊಂದು ಕರಿ ಪರದೆ
ಅದರಾಚೆಗಿನ ಹಾದಿ ಬಲು ನಿಗೂಢ
ಇಣುಕಿ ನೋಡಬೇಕೆಂಬ ಹಂಬಲ
ಆದರಿಣುಕಲಸಾಧ್ಯ!
ಏನೆಣಿಸಿದರೂ ಅದು ಬರಿ ಕನಸು

ನಡೆದು ಬಂದ ಹಾದಿಯ ಮುಸುಕು ಚಿತ್ರ
ಹೂವು-ಹಣ್ಣು, ಜೊತೆಗೆ ಕಲ್ಲು-ಮುಳ್ಳು
ಹಿಂದಿರುಗಿ ಅಲೆಯಬೇಕೆಂಬ ಬಯಕೆ
ಆದರಲೆಯುವುದಸಾಧ್ಯ!
ಏನೆಣಿಸಿದರೂ ಅದು ಬರಿ ನೆನಪು

ಮುಂದಿಣುಕುವಂತಿಲ್ಲ ಹಿಂದಿರುಗುವಂತಿಲ್ಲ
ಮತ್ತೇಕೆ ಅವುಗಳ ಚಿಂತೆ?
ಕನಸು-ನೆನಪುಗಳ ನಡುವೆ
ಪಯಣದ ಸವಿಯ ಮರೆಯುವಿಯೇಕೆ?

2009/10/27

ಲಗೋರಿ

ಕಲ್ಲ ಮೇಲೊಂದು ಕಲ್ಲು ಅದರ ಮೇಲೆ ಮತ್ತೊಂದು
ಎಲ್ಲ ಸೇರಿದರೆ ಲೆಕ್ಕ ಒಟ್ಟು ಏಳು
ಗಲ್ಲಿ ರಸ್ತೆಯ ಮಧ್ಯೆ ಸೇರಿಕೊಂಡು
ಗುಲ್ಲೆಬ್ಬಿಸುತ್ತಿಹರು ಚಿಳ್ಳಿ ಪಿಳ್ಳೆಗಳು
ಹೊನ್ನನೆಂಬ ಹುಡುಗ, ಅವನ ಬಳಿಯೊಂದು ಚೆಂಡು
ತನ್ನ ಚಡ್ಡಿಯನು ಸ್ವಲ್ಪ ಮೇಲೆ ಎಳೆದುಕೊಂಡು
ಕಣ್ಣ ಸಣ್ಣ ಮಾಡಿಕೊಂಡು ನೇರ ಗುರಿಯನಿಟ್ಟ
ಗುನ್ನ ಹೊಡೆಯುವಂತೆ ಬೀಸಿ ಏಟ ಕೊಟ್ಟ
ನೋಡಿ ಅಲ್ಲಿ ಕಲ್ಲುಗಳೆಲ್ಲಾ ಚೆಲ್ಲಾಪಿಲ್ಲಿ
ಓಡುತಿಹರು ಹುಡುಗರು ಹಾರಿಕೊಂಡು
ಚೆಂಡ ಏಟಿಗೆ ಸಿಗದೆ ನುಣುಚಿಕೊಂಡು
ಜೋಡಿಸಲು ಕಲ್ಲ ಬರುವರು ಹುರುಪಿನಲ್ಲಿ
ಬಿತ್ತೊಂದು ಏಟು ... ಅಯ್ಯೋ ಅದು ಆಂಟಿಗೆ
ಮೊತ್ತೊಂದು ಕ್ಷಣದಲ್ಲಿ ಎಲ್ಲಾ ಪರಾರಿ ಒಂದೇ ಏಟಿಗೆ

2009/10/24

ರಾಧೆ-ಕೃಷ್ಣ

ಅನುದಿನವು ರವಿತೇಜ ಪೃಥವಿಯನು ಸುತ್ತುವಂತೆ
ನಮ್ಮೀರ್ವರ ಪ್ರೇಮ ನಿರಂತರಕ್ಕೆ ಸಾಕ್ಷಿಯಂತೆ!

ಮೇಲ್ನೋಟಕೆ ಸೂರ್ಯ ಪೃಥವಿಯನು
ಹಗಲಿರುಳು ಸುತ್ತುತಿಹನು
ಬೆಳಕು-ಕತ್ತಲೆಗಳ ಸೃಷ್ಟಿಸಿ
ಅವಳೊಂದಿಗೆ ಕಣ್ಣಾಮುಚ್ಚಾಲೆ ಆಡುತಿಹನು
ಬಗೆದು ನೋಡಿದರೆ ತಿಳಿಯುವುದು
ಚಲಾಚಲಗಳ ಸತ್ಯ

ಸೂರ್ಯನಂತೆ ನಿಶ್ಚಲ
ಅದರ ಬೆಂಕಿಯುಂಡೆಯಷ್ಟೆ ನಿಷ್ಕಲ್ಮಶ
ನನ್ನ ಸ್ನೇಹ ಚಿತ್ತ
ಪೃಥವಿಯಂತೆ ಸುತ್ತುತಿಹವು
ಅವಳ ಅಂತರಂಗದ ಭಾವನೆಗಳು
ಪುನಃ ಪುನಃ ನನ್ನ ಸುತ್ತ

2009/09/14

ನೆನಪು

ಚಳಿ ಮಳೆಯ ಮುಂಗಾರಿನ ಸಮಯದಲ್ಲಿ ಪ್ರತಿದಿನ
ಹಾಯೆನಿಸುವಷ್ಟು ಕುದಿ ನೀರಲ್ಲಿ ಮೀಯುತ್ತಿದ್ದೆ;
ಈಗಿಲ್ಲ ಆ ಕ್ಷಣಿಕ ಸುಖದ ನೆನಪು

ಹಿತ್ತಲ ಮಲ್ಲಿಗೆ ಬಳ್ಳಿಯಲ್ಲಿನ ಹೂಗಳ
ನರುಗಂಪ ಸವಿಯುತ ಕಾಲ ಕಳೆಯುತ್ತಿದ್ದೆ;
ಎಲ್ಲಿ ಮಾಯವಾಯಿತೋ ಆ ಪರಿಮಳದ ನೆನಪು

ಮತ್ತೇರಿ ಗಂಟೆಗಟ್ಟಲೆ ಮಂಪರು ನಿದ್ದೆ ಮಾಡುವಂತೆ
ಬಾಯಿ ಚಪ್ಪರಿಸುತ ಗಸಗಸೆ ಪಾಯಸವ ಕುಡಿಯುತ್ತಿದ್ದೆ;
ನಾಲಿಗೆಗಿಲ್ಲ ಆ ಸವಿರುಚಿಯ ನೆನಪು

ಮುಸ್ಸಂಜೆಯಲಿ ಧ್ವನಿಸುರುಳಿಗಳ ಹಚ್ಚಿ
ಗಾನಸುಧೆಯೊಂದಿಗೆ ಗುನುಗುನಿಸುತ್ತಿದ್ದೆ;
ಕೇಳದಿಹುದೀಗ ಆ ಇಂಪ ನೆನಪು

ಆದರೆ, ಮನಸ್ಸಲ್ಲಿ ಮರೆಯಲಾಗದಂತೆ ಅಚ್ಚೊತ್ತಿಹುದಲ್ಲ
ಒಮ್ಮೆ ಮಾತ್ರ ಕಂಡ ಅವಳ ಬೊಗಸೆ ಕಂಗಳ ಹೊಳುಪು