2009/08/16

ಕರ್ಮಫಲ

ಮಿಸ್ಸು ಹೇಳಿದರೆಂದು ಕಥೆಯೊಂದ ಬರೆದೆ
ಅದರಲೊಬ್ಬಳು ನಾಯಕಿ, ಹದಿ ಹರೆಯದ ತರುಣಿ
ಪ್ರೇಮದಲಿ ಸಿಲುಕಿ ಬರೆದಳೊಂದು ಓಲೆಯ:

"ಏಳು ಜನುಮಗಳ ಜೊತೆಗಾರ,
ನಮ್ಮೀರ್ವರ ಮಿಲನಕೆ ಸಾಕ್ಷಿ ಬೇಕಿಲ್ಲ
ಆದರೆ, ಈ ತಿಂಗಳು ನಾ ಹೊರಗಾಗಿಲ್ಲ!
ಇಂದು ಬರುವೆಯೆಂದು ಕೈಯ ಹಿಡಿಯುವೆಯೆಂದು
ಕಾದು ಕುಳಿತಿಹೆನು ನಾನು
ನೀ ಬಾರದಿದ್ದರೆ ನನ್ನ ಗತಿಯೇನು?
... ಬಹುಶಃ ಕೆರೆಗೋ‌ ಬಾವಿಗೋ ತುತ್ತು."

ಒಂದು ಸಂಜೆ ಶಾಲೆಯಿಂದ ಬಂದೊಡನೆ ಅಯ್ಯೋ! ಬಿತ್ತೊಂದು ಏಟು
ತಿರುಗಿ ನೋಡಿದರೆ ಅಪ್ಪನ ಕೈಯಲ್ಲೊಂದು ಬಾರು ಕೋಲು
ಪಕ್ಕದಲ್ಲಿ ಅಮ್ಮ ಕಣ್ಣೀರಿಡುತ್ತಿದ್ದಳು; ಅವಳ ಕೈಯಲ್ಲೊಂದು ಪತ್ರವಿತ್ತು.

2009/08/06

ಸಂಗೀತ

ಬೆಂಗಳೂರಿನ ಇನ್ನೊಂದು ತುದಿಯಲ್ಲಿ ಗಾನಸುಧೆಯೆಂದು ಕೇಳಿ
ಒಂದು ಗಂಟೆ ಮುಂಚಿತವಾಗಿಯೇ ಬೈಕಿನಲ್ಲಿ ಹೊರಟಿದ್ದೆ
ಎಲ್ಲೆಲ್ಲೂ ವಾಹನಗಳು ಕೆಂಪು-ಹಸಿರು ದೀಪಗಳನ್ನನುಸರಿಸುತ್ತಿದ್ದವು.

ತಡವಾಗಿ ತಲುಪಿದರೂ ವರ್ಣವಿನ್ನೂ ಮುಗಿದಿರಲಿಲ್ಲ
ಕಲ್ಯಾಣಿಯಲ್ಲಿ ಆಲಾಪನೆ, ನೆರುವಲ್, ಸ್ವರಪ್ರಸ್ತಾರ
ನಂತರ ಭೈರವಿಯಲ್ಲಿ ರಾಗ, ತಾನ, ಪಲ್ಲವಿ
ಕನ್ನಡಿಗರೆದುರು ಎಂದು ಕೃಷ್ಣ ನೀ ಬೇಗನೆ ಬಾರೋ
ಕೊನೆಯಲ್ಲಿ ಶಾಸ್ತ್ರದಂತೆ ಪವಮಾನದ ಮಂಗಳ.
ಎಲ್ಲಾ ಅದ್ಭುತ, ಅತ್ಯದ್ಭುತ!

ವಾಪಾಸಾಗುವಾಗ ಮತ್ತದೇ ಟ್ರಾಫಿಕ್ ಗೋಳು
ಬಸ್ಸು, ಕಾರು, ಲಾರಿಗಳ ಮೆರವಣಿಗೆ
ರಿಂಗ್ ರೋಡ್ ಉದ್ದಕ್ಕೂ ಹೊಗೆ, ಧೂಳು.

ರಾತ್ರಿ ಮಲಗುವಾಗಲೂ ಭೈರವಿಯಲ್ಲೇ ಗುನುಗುನಿಸುತ್ತಿದ್ದೆ
ಕನಸಿನಲ್ಲಿ ಮಾತ್ರ ವಾಹನಗಳದೇ ಅಬ್ಬರ.

2009/08/04

ಪೊಲೀಸ್ ಭೇಟಿ

ಮುಂಬೈನ ಮಾಹಿಮ್‍ನಲ್ಲಿರುವ ಸಣ್ಣ ಮನೆಯಲ್ಲಿ ನಾವು ಮೂವರು ಪಡ್ಡೆ ಹುಡುಗರು
ಸುಪ್ರಭಾತದ ಹೊತ್ತಿಗೇ ಬಂದೂಕ ಹಿಡಿದು ನುಗ್ಗಿದ್ದರು ಪೊಲೀಸರು, ಬಿರುಗಾಳಿಯಂತೆ.
ಮನೆಯೆಲ್ಲಾ ಹುಡುಕಿದ ನಂತರ ಅವರ ಮುಖದಲ್ಲೇಕೋ ನಿರಾಸೆಯ ಭಾವ.

ನಮ್ಮ ಬಗ್ಗೆ ಅವರಿಗೆ ನಮಗಿಂತ ಹೆಚ್ಚಿನ ತಿಳುವಳಿಕೆ:
ನಾವು ಓಡಾಡುವ ಟ್ಯಾಕ್ಸಿಗಳ ಸಂಖ್ಯೆ, ತಿರುಗಾಡಿದ ಜಾಗಗಳು, ಹೋಟೆಲುಗಳು,
ನೋಡಿದ ಸಿನೆಮಾಗಳು, ಭೇಟಿಯಾದ ವ್ಯಕ್ತಿಗಳು, ...

ಜೊತೆಗೆ, ಕಳೆದ ವಾರ ಅಡುಗೆಮನೆಗೆ ಕೊಂಡ ಎಂಟು ಚಾಕುಗಳ ಸೆಟ್ಟು,
ಬದಲಾಯಿಸಿದ ಎರಡು ಮೊಬೈಲುಗಳ ವಿವರ, ಪಾಸ್‍ಪೋರ್ಟ್ ಅರ್ಜಿ,
ಅಣ್ಣ ಅಮೇರಿಕಾದಿಂದ ಕಳುಹಿಸಿದ ಇಪ್ಪತ್ತು ಸಾವಿರ ಡಾಲರುಗಳು, ಇತ್ಯಾದಿ.

ಅನುಮಾನದ ಸುಳಿಯ ಕೊನೆಯಲ್ಲಿ ಅವರದೊಂದೇ ಸವಾಲು:
"ನೀನು ಮುಸಲ್ಮಾನನಲ್ಲ, ಹಿಂದೂ ಎಂದು ಸಿದ್ಧಪಡಿಸು"!
ಕೈಯಲ್ಲಿನ್ನೂ ಪಿಸ್ತೂಲಿತ್ತು, ನಮ್ಮೆಲ್ಲರ ಮೈ ಬೆವತಿತ್ತು, ಕೈ ಕಾಲು ನಡುಗುತ್ತಿದ್ದವು.

ನಮ್ಮೂರ ಲಕ್ಷ್ಮಣ ಭಟ್ಟರ ಮಾತು ಸುಳ್ಳಲ್ಲ
ಜನಿವಾರ ಹಾಗೂ ಗಾಯತ್ರಿ ಮಂತ್ರ ಕಷ್ಟದಲ್ಲಿದ್ದವರಿಗೆ ಆಸರೆ.

2009/08/02

ಅಜ್ಞಾತವಾಸದ ಬಳಿಕ

ಹದಿನಾಲ್ಕು ವರ್ಷದ ಹಿಂದಿನ ನೆನಪು ಕೆದಕಿ "ಈಗ ಅವಳೆಲ್ಲಿ?" ಎಂದು ಕೇಳಿದಾಗ
ಹಳೆ ಕಾಗದ ನೋಡಿ ಮಿಸ್ಸು ಹೇಳಿದ್ದು " ಹೈಸ್ಕೂಲಿಗೆ ಸೇರಿದ್ದಳು"; ಮೊಗದಲ್ಲಿ ಅದೇ ಹಿಂದಿನ ನಗುವಿತ್ತು.

ಪ್ಯೂನಿಗೆ ಐದು, ಗುಮಾಸ್ತನಿಗೆ ಹತ್ತು, ಜೊತೆಗೆ ಒಂದಿಷ್ಟು ಸುಳ್ಳು ಸೇರಿಸಿ ಶೋಧನೆ ಮುಂದುವರೆಸಿದಾಗ
"ಅವಳು ನಮ್ಮ ಕಾಲೇಜಿನಲ್ಲೇ ಪಿ.ಯು.ಸಿ ಮಾಡಿದ್ದು"; ಎಲ್ಲೆಲ್ಲೂ ಉದಾಸೀನತೆಯಿತ್ತು.

ಈಗಾಗಲೇ ಕೊಟ್ಟಿರುವ ಭಕ್ಷೀಸಿನ ನೆಪ ಒಡ್ಡಿ ಮತ್ತೊಮ್ಮೆ ಕಡತಗಳನ್ನು ಹುಡುಕಿಸಿದಾಗ
"ನಂತರ ಕಾಲೇಜಿನಲ್ಲಿ ಬಿ.ಎ ಮಾಡಲು ಹೋದಳು"; ಉದಾಸೀನತೆ ಸಿಟ್ಟಾಗಿತ್ತು.

ಕಾಲೇಜಿನ ಕನ್ನಡ ಅಧ್ಯಾಪಕರ ಬಳಿ ಅವರ ಶಿಷ್ಯೆಯಾಗಿದ್ದ ಅವಳ ಬಗ್ಗೆ ಕೇಳಿದಾಗ
"ಅವಳ ನೆನಪಿಲ್ಲ, ಅದೇ ಕ್ಲಾಸಿನ ಇನ್ನೊಬ್ಬಳು ನಮ್ಮ ರಸ್ತೆಯಲ್ಲೇ ಇರುವುದು"; ಉತ್ತರದಲ್ಲಿ ನಿರ್ಲಿಪ್ತತೆಯಿತ್ತು.

ಇನ್ನೊಬ್ಬಳ ಮನೆ ಹುಡುಕಿ, ಅಧ್ಯಾಪಕರ ಹೆಸರೆತ್ತಿ ಸಹಪಾಠಿಯ ವಿಳಾಸ ಕೇಳಿದಾಗ
"ಅವಳ ಪರಿಚಯ ಕಮ್ಮಿ, ಮತ್ತೊಬ್ಬಳನ್ನು ಕೇಳಿ"; ಆಶ್ಚರ್ಯ ಮನೆಮಾಡಿತ್ತು.

ಮತ್ತೊಬ್ಬಳ ಮನೆಗೆ ನಾಲ್ಕೈದು ದಿನ ಅಲೆದು, ಕೊನೆಗೊಮ್ಮೆ ಸಿಕ್ಕಾಗ
"ಸಿಕ್ಕಿ ಎರಡು ವರ್ಷವಾಯಿತು, ಇದು ಅವಳ ವಿಳಾಸ"; ಸ್ವಲ್ಪ ಕುತೂಹಲವಿತ್ತು.

ಕರೆಗಂಟೆಯ ಸದ್ದು, ತೆರೆದ ಬಾಗಿಲು, ಪರಿಚಯ, ಒಳಗೆ ಬಾ ಎಂಬ ಆಮಂತ್ರಣ
ಒಳಗೆ ಕಾಲಿಡುತ್ತಿದ್ದಂತೆ ಎದುರಿಗೆ ಅವಳ ಅಂದವಾದ ಭಾವಚಿತ್ರ ... ಅದರ ಮೇಲೆ ಹೂವಿನ ಹಾರವಿತ್ತು.