2009/11/20

ಪಯಣ

ಕಣ್ಣೆದುರಿಗೊಂದು ಕರಿ ಪರದೆ
ಅದರಾಚೆಗಿನ ಹಾದಿ ಬಲು ನಿಗೂಢ
ಇಣುಕಿ ನೋಡಬೇಕೆಂಬ ಹಂಬಲ
ಆದರಿಣುಕಲಸಾಧ್ಯ!
ಏನೆಣಿಸಿದರೂ ಅದು ಬರಿ ಕನಸು

ನಡೆದು ಬಂದ ಹಾದಿಯ ಮುಸುಕು ಚಿತ್ರ
ಹೂವು-ಹಣ್ಣು, ಜೊತೆಗೆ ಕಲ್ಲು-ಮುಳ್ಳು
ಹಿಂದಿರುಗಿ ಅಲೆಯಬೇಕೆಂಬ ಬಯಕೆ
ಆದರಲೆಯುವುದಸಾಧ್ಯ!
ಏನೆಣಿಸಿದರೂ ಅದು ಬರಿ ನೆನಪು

ಮುಂದಿಣುಕುವಂತಿಲ್ಲ ಹಿಂದಿರುಗುವಂತಿಲ್ಲ
ಮತ್ತೇಕೆ ಅವುಗಳ ಚಿಂತೆ?
ಕನಸು-ನೆನಪುಗಳ ನಡುವೆ
ಪಯಣದ ಸವಿಯ ಮರೆಯುವಿಯೇಕೆ?

2009/10/27

ಲಗೋರಿ

ಕಲ್ಲ ಮೇಲೊಂದು ಕಲ್ಲು ಅದರ ಮೇಲೆ ಮತ್ತೊಂದು
ಎಲ್ಲ ಸೇರಿದರೆ ಲೆಕ್ಕ ಒಟ್ಟು ಏಳು
ಗಲ್ಲಿ ರಸ್ತೆಯ ಮಧ್ಯೆ ಸೇರಿಕೊಂಡು
ಗುಲ್ಲೆಬ್ಬಿಸುತ್ತಿಹರು ಚಿಳ್ಳಿ ಪಿಳ್ಳೆಗಳು
ಹೊನ್ನನೆಂಬ ಹುಡುಗ, ಅವನ ಬಳಿಯೊಂದು ಚೆಂಡು
ತನ್ನ ಚಡ್ಡಿಯನು ಸ್ವಲ್ಪ ಮೇಲೆ ಎಳೆದುಕೊಂಡು
ಕಣ್ಣ ಸಣ್ಣ ಮಾಡಿಕೊಂಡು ನೇರ ಗುರಿಯನಿಟ್ಟ
ಗುನ್ನ ಹೊಡೆಯುವಂತೆ ಬೀಸಿ ಏಟ ಕೊಟ್ಟ
ನೋಡಿ ಅಲ್ಲಿ ಕಲ್ಲುಗಳೆಲ್ಲಾ ಚೆಲ್ಲಾಪಿಲ್ಲಿ
ಓಡುತಿಹರು ಹುಡುಗರು ಹಾರಿಕೊಂಡು
ಚೆಂಡ ಏಟಿಗೆ ಸಿಗದೆ ನುಣುಚಿಕೊಂಡು
ಜೋಡಿಸಲು ಕಲ್ಲ ಬರುವರು ಹುರುಪಿನಲ್ಲಿ
ಬಿತ್ತೊಂದು ಏಟು ... ಅಯ್ಯೋ ಅದು ಆಂಟಿಗೆ
ಮೊತ್ತೊಂದು ಕ್ಷಣದಲ್ಲಿ ಎಲ್ಲಾ ಪರಾರಿ ಒಂದೇ ಏಟಿಗೆ

2009/10/24

ರಾಧೆ-ಕೃಷ್ಣ

ಅನುದಿನವು ರವಿತೇಜ ಪೃಥವಿಯನು ಸುತ್ತುವಂತೆ
ನಮ್ಮೀರ್ವರ ಪ್ರೇಮ ನಿರಂತರಕ್ಕೆ ಸಾಕ್ಷಿಯಂತೆ!

ಮೇಲ್ನೋಟಕೆ ಸೂರ್ಯ ಪೃಥವಿಯನು
ಹಗಲಿರುಳು ಸುತ್ತುತಿಹನು
ಬೆಳಕು-ಕತ್ತಲೆಗಳ ಸೃಷ್ಟಿಸಿ
ಅವಳೊಂದಿಗೆ ಕಣ್ಣಾಮುಚ್ಚಾಲೆ ಆಡುತಿಹನು
ಬಗೆದು ನೋಡಿದರೆ ತಿಳಿಯುವುದು
ಚಲಾಚಲಗಳ ಸತ್ಯ

ಸೂರ್ಯನಂತೆ ನಿಶ್ಚಲ
ಅದರ ಬೆಂಕಿಯುಂಡೆಯಷ್ಟೆ ನಿಷ್ಕಲ್ಮಶ
ನನ್ನ ಸ್ನೇಹ ಚಿತ್ತ
ಪೃಥವಿಯಂತೆ ಸುತ್ತುತಿಹವು
ಅವಳ ಅಂತರಂಗದ ಭಾವನೆಗಳು
ಪುನಃ ಪುನಃ ನನ್ನ ಸುತ್ತ

2009/09/14

ನೆನಪು

ಚಳಿ ಮಳೆಯ ಮುಂಗಾರಿನ ಸಮಯದಲ್ಲಿ ಪ್ರತಿದಿನ
ಹಾಯೆನಿಸುವಷ್ಟು ಕುದಿ ನೀರಲ್ಲಿ ಮೀಯುತ್ತಿದ್ದೆ;
ಈಗಿಲ್ಲ ಆ ಕ್ಷಣಿಕ ಸುಖದ ನೆನಪು

ಹಿತ್ತಲ ಮಲ್ಲಿಗೆ ಬಳ್ಳಿಯಲ್ಲಿನ ಹೂಗಳ
ನರುಗಂಪ ಸವಿಯುತ ಕಾಲ ಕಳೆಯುತ್ತಿದ್ದೆ;
ಎಲ್ಲಿ ಮಾಯವಾಯಿತೋ ಆ ಪರಿಮಳದ ನೆನಪು

ಮತ್ತೇರಿ ಗಂಟೆಗಟ್ಟಲೆ ಮಂಪರು ನಿದ್ದೆ ಮಾಡುವಂತೆ
ಬಾಯಿ ಚಪ್ಪರಿಸುತ ಗಸಗಸೆ ಪಾಯಸವ ಕುಡಿಯುತ್ತಿದ್ದೆ;
ನಾಲಿಗೆಗಿಲ್ಲ ಆ ಸವಿರುಚಿಯ ನೆನಪು

ಮುಸ್ಸಂಜೆಯಲಿ ಧ್ವನಿಸುರುಳಿಗಳ ಹಚ್ಚಿ
ಗಾನಸುಧೆಯೊಂದಿಗೆ ಗುನುಗುನಿಸುತ್ತಿದ್ದೆ;
ಕೇಳದಿಹುದೀಗ ಆ ಇಂಪ ನೆನಪು

ಆದರೆ, ಮನಸ್ಸಲ್ಲಿ ಮರೆಯಲಾಗದಂತೆ ಅಚ್ಚೊತ್ತಿಹುದಲ್ಲ
ಒಮ್ಮೆ ಮಾತ್ರ ಕಂಡ ಅವಳ ಬೊಗಸೆ ಕಂಗಳ ಹೊಳುಪು

2009/08/24

ಭೇದ

ಜೂಗೆ ಹೋಗುವಾಗ ದಾರಿಯಲ್ಲಿ
ತಿಮ್ಮ ಸ್ನೇಹಿತನಿಗೆ ಬುದ್ಧಿ ಹೇಳುತ್ತಿದ್ದ:
"ಹುಡುಗಿ ನೋಡಲು ಚೆನ್ನಿಲ್ಲ ಎಂದಮಾತ್ರಕ್ಕೆ
ನೀನು ಮದುವೆಗೆ ಒಪ್ಪದಿದ್ದುದು ಸರಿಯಲ್ಲ;
ಅವಳೂ ಮನುಷ್ಯಳಲ್ಲವೆ?
ಅಂದ ಚೆಂದಕೆ ಮಾರುಹೋಗುವುದು ಮೂರ್ಖರ ಲಕ್ಷಣ!"
ಸ್ನೇಹಿತ ಯೋಚಿಸುತ್ತಿದ್ದ.

ಗರಿಗೆದರಿದ ನವಿಲ ನರ್ತನವ ನೋಡಿ ಸ್ನೇಹಿತನೆಂದ:
"ಕೆಲ ದೇಶಗಳಲ್ಲಿ ಇದರ ಮಾಂಸವನ್ನು ತಿನ್ನುವರಂತೆ!"
"ಇಷ್ಟು ಸುಂದರವಾಗಿರುವುದನ್ನು ಕಡಿದು ತಿನ್ನಲು
ಮನಸ್ಸು ಬರುವುದಾದರೂ ಹೇಗೆ" ಎಂದ ತಿಮ್ಮ.
ವಾಪಾಸಾಗುವಾಗ ಊಟಕ್ಕೆ ಹೋಟಲಿಗೆ ಹೋದಾಗ
ತಿಮ್ಮ ಮಾಣಿಗೆ ಚಿಕನ್ ಬಿರಿಯಾನಿ ತರಲು ಹೇಳಿದ.
ಸ್ನೇಹಿತ ಯೋಚಿಸುತ್ತಿದ್ದ.

2009/08/23

ಸಂಯಮ

ಲಿಫ್ಟಿನಲ್ಲಿ ಬಂಧಿತ; ಜೊತೆಗೆ ಐವತ್ತರ ಆಸುಪಾಸಿನ ಆಸಾಮಿ
ಕಾಲು ಗಂಟೆಯೊಳಗೆ ಆಫೀಸಿನಲ್ಲಿ ಮೀಟಿಂಗಿಗೆ ಹೋಗದಿದ್ದರೆ
ಕೆಲಸ ಹೋಗುವುದಂತೂ ಖಂಡಿತ

ಬಾಗಿಲ ತೆಗೆಯಲು ನಾನು ಕಷ್ಟಪಡುತ್ತಿದ್ದರೆ
ಅವರು ಅಲ್ಲೇ ಕೊಳಕು ಲಿಫ್ಟಿನಲ್ಲಿ ಕುಳಿತರು
ಕಣ್ಣು ಕೆಂಪಾಗಿದೆ, ಧ್ವನಿ ಹಿಡಿತದಲ್ಲಿಲ್ಲ ... ಬೆಳಗ್ಗೆಯೇ ಎಣ್ಣೆಯೆ?
ಹಣೆಯಲ್ಲಿ ಕುಂಕುಮ ಬೇರೇ; ಹಿಪೋಕ್ರಿಟ್ಸ್!

ವಾಚ್ಮನ್ ಬಂದು ಯಾರಿಗೋ ಕರೆ ಮಾಡಿದ; ಸರಿಮಾಡಲು ಬರುವರಂತೆ.
ಇದ್ದ ಕೆಲಸವೂ ಹೋಯಿತಲ್ಲ ಎಂದು ತನುಮನಗಳಲ್ಲಿ ದುಃಖ-ಸಿಟ್ಟು
ಅವರೋ "ತಾಳ್ಮೆಯಿರಲಿ; ಚಿಂತಿಸಬೇಡ, ದೇವರಿದ್ದಾನೆ!" ಎನ್ನುತ್ತಿರುವರು
ಕುಡುಕರಿಗೇನು ಗೊತ್ತು ಸಮಯದ ಮಹತ್ವ

ಒಂದು ಗಂಟೆ ತರುವಾಯು ಬಿಡುಗಡೆ; "ಡ್ರಾಪ್ ಬೇಕಾ?" ಎಂದು ಕೇಳಿದೆ
ವಿನಾಯಕ ಆಸ್ಪತ್ರೆಯ ಬಳಿ ಇಳಿಯುವಾಗ ಹೇಳಿದರು:
ಪೂಜೆ ಮಾಡುವಾಗ ಕರೆ ಬಂದಿತ್ತಂತೆ, ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು

2009/08/21

ಅಡಗೂಲಜ್ಜಿ ಕಥೆ

ವೀರಕೇಸರಿಯ ಪ್ರೇಮಕಥೆಯ ಕೇಳಿ
ಕರುಣೆಯಿಂದಲಿ ಮರುಗಿದನು
ವರವ ರೂಪದಲಿ ಮಂತ್ರವೊಂದನು ಹೇಳಿ
ಹಾರುವ ಕುದುರೆಯೊಂದ ಕೊಟ್ಟನು
ಏಳು ಸಾಗರವ ದಾಟಿ, ಏಳು ಪರ್ವತಗಳನೇರಿ
ಧೂಳನೆಬ್ಬಿಸುತ ಸಾಗಿತು ಬಿಳಿಕುದುರಿ
ಚಳಿಮಳೆಯ, ಉರಿಬಿಸಿಲ ಲೆಕ್ಕಿಸದೆ
ಅಳುಕಿಲ್ಲದೆ ಓಡಿತು ಮುಂದೆ ಮುಂದೆ
ಕಟ್ಟಕಡೆಗೊಂದು ದಿನ ಮುಸ್ಸಂಜೆ ಹೊತ್ತಿನಲಿ
ದಟ್ಟಡವಿಯೊಂದ ತಲುಪಿದ ಕೇಸರಿ
ಪುಟ್ಟ ಗುಹೆಗೆ ಅಲ್ಲೊಂದು ದಾರಿ
ಅಟ್ಟಹಾಸದ ನಗುವು ಕೇಳಿಸಿತಲ್ಲಿ
ನಿದ್ದೆ ಮಾಡಿ ಅಜ್ಜಿ ಗೊರಕೆ ಹೊಡೆಯುತ್ತಿದ್ದಳು
ಸದ್ದಿಲ್ಲದೆ ಕಥೆಯ ನಿಲ್ಲಿಸಿ ಮುಸುಕೆಳೆದಳು ಮೊಮ್ಮಗಳು

2009/08/19

ಉಡುಗೊರೆಯ ನೆನಪು

ಹನ್ನೆರಡು ವರ್ಷಗಳ ಹಿಂದೆ ಸೋದರಮಾವ ವಿದೇಶಕ್ಕೆ ಹೊರಟಾಗ
ಅಳಿಯನಿಗೆ ನಾಲ್ಕು ವರುಷ ತುಂಬಿತ್ತಷ್ಟೆ

ದೂರವಾದರೇನು, ಮಾವನಿಗೆ ಅಳಿಯನ ಮೇಲೆ ಮಮತೆ
ಪ್ರತಿ ವರುಷ ಅವನ ಹುಟ್ಟುಹಬ್ಬಕ್ಕೆ
ತಪ್ಪದೇ ತಲುಪುತ್ತಿತ್ತು ಬಣ್ಣ ಬಣ್ಣದ ಉಡುಗೊರೆ:
ತುತ್ತೂರಿ, ಪೆನ್ನು, ವಾಚು, ಗೇಮು ... ಇತ್ಯಾದಿ

ಅಳಿಯನಿಗೆ ಉಡುಗೊರೆ ಕಂಡಾಕ್ಷಣ
ಕುಣಿದು ಕುಪ್ಪಳಿಸುವಷ್ಟು ಸಂತೋಷ
ಆದರೆ ಹತ್ತು ದಿನಗಳ ನಂತರ
ಅವನೆಲ್ಲೋ ಉಡುಗೊರೆ ಇನ್ನೆಲ್ಲೋ

ಮಾವ ಬರುವರೆಂದು ಕೇಳಿ ಅಳಿಯ ಕೆನ್ನೆ ಮುಟ್ಟಿಕೊಂಡ
ಏಕೆಂದು ಕೇಳಿದರೆ ನುಡಿದ:
"ಅವರೆಂದರೆ ನನಗೆ ನೆನಪಿಗೆ ಬರುವುದು
ಹನ್ನೆರಡು ವರುಷಗಳ ಹಿಂದೆ ಅವರು ಕೊಟ್ಟ ಏಟು ಮಾತ್ರ"

2009/08/16

ಕರ್ಮಫಲ

ಮಿಸ್ಸು ಹೇಳಿದರೆಂದು ಕಥೆಯೊಂದ ಬರೆದೆ
ಅದರಲೊಬ್ಬಳು ನಾಯಕಿ, ಹದಿ ಹರೆಯದ ತರುಣಿ
ಪ್ರೇಮದಲಿ ಸಿಲುಕಿ ಬರೆದಳೊಂದು ಓಲೆಯ:

"ಏಳು ಜನುಮಗಳ ಜೊತೆಗಾರ,
ನಮ್ಮೀರ್ವರ ಮಿಲನಕೆ ಸಾಕ್ಷಿ ಬೇಕಿಲ್ಲ
ಆದರೆ, ಈ ತಿಂಗಳು ನಾ ಹೊರಗಾಗಿಲ್ಲ!
ಇಂದು ಬರುವೆಯೆಂದು ಕೈಯ ಹಿಡಿಯುವೆಯೆಂದು
ಕಾದು ಕುಳಿತಿಹೆನು ನಾನು
ನೀ ಬಾರದಿದ್ದರೆ ನನ್ನ ಗತಿಯೇನು?
... ಬಹುಶಃ ಕೆರೆಗೋ‌ ಬಾವಿಗೋ ತುತ್ತು."

ಒಂದು ಸಂಜೆ ಶಾಲೆಯಿಂದ ಬಂದೊಡನೆ ಅಯ್ಯೋ! ಬಿತ್ತೊಂದು ಏಟು
ತಿರುಗಿ ನೋಡಿದರೆ ಅಪ್ಪನ ಕೈಯಲ್ಲೊಂದು ಬಾರು ಕೋಲು
ಪಕ್ಕದಲ್ಲಿ ಅಮ್ಮ ಕಣ್ಣೀರಿಡುತ್ತಿದ್ದಳು; ಅವಳ ಕೈಯಲ್ಲೊಂದು ಪತ್ರವಿತ್ತು.

2009/08/06

ಸಂಗೀತ

ಬೆಂಗಳೂರಿನ ಇನ್ನೊಂದು ತುದಿಯಲ್ಲಿ ಗಾನಸುಧೆಯೆಂದು ಕೇಳಿ
ಒಂದು ಗಂಟೆ ಮುಂಚಿತವಾಗಿಯೇ ಬೈಕಿನಲ್ಲಿ ಹೊರಟಿದ್ದೆ
ಎಲ್ಲೆಲ್ಲೂ ವಾಹನಗಳು ಕೆಂಪು-ಹಸಿರು ದೀಪಗಳನ್ನನುಸರಿಸುತ್ತಿದ್ದವು.

ತಡವಾಗಿ ತಲುಪಿದರೂ ವರ್ಣವಿನ್ನೂ ಮುಗಿದಿರಲಿಲ್ಲ
ಕಲ್ಯಾಣಿಯಲ್ಲಿ ಆಲಾಪನೆ, ನೆರುವಲ್, ಸ್ವರಪ್ರಸ್ತಾರ
ನಂತರ ಭೈರವಿಯಲ್ಲಿ ರಾಗ, ತಾನ, ಪಲ್ಲವಿ
ಕನ್ನಡಿಗರೆದುರು ಎಂದು ಕೃಷ್ಣ ನೀ ಬೇಗನೆ ಬಾರೋ
ಕೊನೆಯಲ್ಲಿ ಶಾಸ್ತ್ರದಂತೆ ಪವಮಾನದ ಮಂಗಳ.
ಎಲ್ಲಾ ಅದ್ಭುತ, ಅತ್ಯದ್ಭುತ!

ವಾಪಾಸಾಗುವಾಗ ಮತ್ತದೇ ಟ್ರಾಫಿಕ್ ಗೋಳು
ಬಸ್ಸು, ಕಾರು, ಲಾರಿಗಳ ಮೆರವಣಿಗೆ
ರಿಂಗ್ ರೋಡ್ ಉದ್ದಕ್ಕೂ ಹೊಗೆ, ಧೂಳು.

ರಾತ್ರಿ ಮಲಗುವಾಗಲೂ ಭೈರವಿಯಲ್ಲೇ ಗುನುಗುನಿಸುತ್ತಿದ್ದೆ
ಕನಸಿನಲ್ಲಿ ಮಾತ್ರ ವಾಹನಗಳದೇ ಅಬ್ಬರ.

2009/08/04

ಪೊಲೀಸ್ ಭೇಟಿ

ಮುಂಬೈನ ಮಾಹಿಮ್‍ನಲ್ಲಿರುವ ಸಣ್ಣ ಮನೆಯಲ್ಲಿ ನಾವು ಮೂವರು ಪಡ್ಡೆ ಹುಡುಗರು
ಸುಪ್ರಭಾತದ ಹೊತ್ತಿಗೇ ಬಂದೂಕ ಹಿಡಿದು ನುಗ್ಗಿದ್ದರು ಪೊಲೀಸರು, ಬಿರುಗಾಳಿಯಂತೆ.
ಮನೆಯೆಲ್ಲಾ ಹುಡುಕಿದ ನಂತರ ಅವರ ಮುಖದಲ್ಲೇಕೋ ನಿರಾಸೆಯ ಭಾವ.

ನಮ್ಮ ಬಗ್ಗೆ ಅವರಿಗೆ ನಮಗಿಂತ ಹೆಚ್ಚಿನ ತಿಳುವಳಿಕೆ:
ನಾವು ಓಡಾಡುವ ಟ್ಯಾಕ್ಸಿಗಳ ಸಂಖ್ಯೆ, ತಿರುಗಾಡಿದ ಜಾಗಗಳು, ಹೋಟೆಲುಗಳು,
ನೋಡಿದ ಸಿನೆಮಾಗಳು, ಭೇಟಿಯಾದ ವ್ಯಕ್ತಿಗಳು, ...

ಜೊತೆಗೆ, ಕಳೆದ ವಾರ ಅಡುಗೆಮನೆಗೆ ಕೊಂಡ ಎಂಟು ಚಾಕುಗಳ ಸೆಟ್ಟು,
ಬದಲಾಯಿಸಿದ ಎರಡು ಮೊಬೈಲುಗಳ ವಿವರ, ಪಾಸ್‍ಪೋರ್ಟ್ ಅರ್ಜಿ,
ಅಣ್ಣ ಅಮೇರಿಕಾದಿಂದ ಕಳುಹಿಸಿದ ಇಪ್ಪತ್ತು ಸಾವಿರ ಡಾಲರುಗಳು, ಇತ್ಯಾದಿ.

ಅನುಮಾನದ ಸುಳಿಯ ಕೊನೆಯಲ್ಲಿ ಅವರದೊಂದೇ ಸವಾಲು:
"ನೀನು ಮುಸಲ್ಮಾನನಲ್ಲ, ಹಿಂದೂ ಎಂದು ಸಿದ್ಧಪಡಿಸು"!
ಕೈಯಲ್ಲಿನ್ನೂ ಪಿಸ್ತೂಲಿತ್ತು, ನಮ್ಮೆಲ್ಲರ ಮೈ ಬೆವತಿತ್ತು, ಕೈ ಕಾಲು ನಡುಗುತ್ತಿದ್ದವು.

ನಮ್ಮೂರ ಲಕ್ಷ್ಮಣ ಭಟ್ಟರ ಮಾತು ಸುಳ್ಳಲ್ಲ
ಜನಿವಾರ ಹಾಗೂ ಗಾಯತ್ರಿ ಮಂತ್ರ ಕಷ್ಟದಲ್ಲಿದ್ದವರಿಗೆ ಆಸರೆ.

2009/08/02

ಅಜ್ಞಾತವಾಸದ ಬಳಿಕ

ಹದಿನಾಲ್ಕು ವರ್ಷದ ಹಿಂದಿನ ನೆನಪು ಕೆದಕಿ "ಈಗ ಅವಳೆಲ್ಲಿ?" ಎಂದು ಕೇಳಿದಾಗ
ಹಳೆ ಕಾಗದ ನೋಡಿ ಮಿಸ್ಸು ಹೇಳಿದ್ದು " ಹೈಸ್ಕೂಲಿಗೆ ಸೇರಿದ್ದಳು"; ಮೊಗದಲ್ಲಿ ಅದೇ ಹಿಂದಿನ ನಗುವಿತ್ತು.

ಪ್ಯೂನಿಗೆ ಐದು, ಗುಮಾಸ್ತನಿಗೆ ಹತ್ತು, ಜೊತೆಗೆ ಒಂದಿಷ್ಟು ಸುಳ್ಳು ಸೇರಿಸಿ ಶೋಧನೆ ಮುಂದುವರೆಸಿದಾಗ
"ಅವಳು ನಮ್ಮ ಕಾಲೇಜಿನಲ್ಲೇ ಪಿ.ಯು.ಸಿ ಮಾಡಿದ್ದು"; ಎಲ್ಲೆಲ್ಲೂ ಉದಾಸೀನತೆಯಿತ್ತು.

ಈಗಾಗಲೇ ಕೊಟ್ಟಿರುವ ಭಕ್ಷೀಸಿನ ನೆಪ ಒಡ್ಡಿ ಮತ್ತೊಮ್ಮೆ ಕಡತಗಳನ್ನು ಹುಡುಕಿಸಿದಾಗ
"ನಂತರ ಕಾಲೇಜಿನಲ್ಲಿ ಬಿ.ಎ ಮಾಡಲು ಹೋದಳು"; ಉದಾಸೀನತೆ ಸಿಟ್ಟಾಗಿತ್ತು.

ಕಾಲೇಜಿನ ಕನ್ನಡ ಅಧ್ಯಾಪಕರ ಬಳಿ ಅವರ ಶಿಷ್ಯೆಯಾಗಿದ್ದ ಅವಳ ಬಗ್ಗೆ ಕೇಳಿದಾಗ
"ಅವಳ ನೆನಪಿಲ್ಲ, ಅದೇ ಕ್ಲಾಸಿನ ಇನ್ನೊಬ್ಬಳು ನಮ್ಮ ರಸ್ತೆಯಲ್ಲೇ ಇರುವುದು"; ಉತ್ತರದಲ್ಲಿ ನಿರ್ಲಿಪ್ತತೆಯಿತ್ತು.

ಇನ್ನೊಬ್ಬಳ ಮನೆ ಹುಡುಕಿ, ಅಧ್ಯಾಪಕರ ಹೆಸರೆತ್ತಿ ಸಹಪಾಠಿಯ ವಿಳಾಸ ಕೇಳಿದಾಗ
"ಅವಳ ಪರಿಚಯ ಕಮ್ಮಿ, ಮತ್ತೊಬ್ಬಳನ್ನು ಕೇಳಿ"; ಆಶ್ಚರ್ಯ ಮನೆಮಾಡಿತ್ತು.

ಮತ್ತೊಬ್ಬಳ ಮನೆಗೆ ನಾಲ್ಕೈದು ದಿನ ಅಲೆದು, ಕೊನೆಗೊಮ್ಮೆ ಸಿಕ್ಕಾಗ
"ಸಿಕ್ಕಿ ಎರಡು ವರ್ಷವಾಯಿತು, ಇದು ಅವಳ ವಿಳಾಸ"; ಸ್ವಲ್ಪ ಕುತೂಹಲವಿತ್ತು.

ಕರೆಗಂಟೆಯ ಸದ್ದು, ತೆರೆದ ಬಾಗಿಲು, ಪರಿಚಯ, ಒಳಗೆ ಬಾ ಎಂಬ ಆಮಂತ್ರಣ
ಒಳಗೆ ಕಾಲಿಡುತ್ತಿದ್ದಂತೆ ಎದುರಿಗೆ ಅವಳ ಅಂದವಾದ ಭಾವಚಿತ್ರ ... ಅದರ ಮೇಲೆ ಹೂವಿನ ಹಾರವಿತ್ತು.

2009/07/31

ಮುನ್ನುಡಿ

ಹಿಂದಿನ ಅನುಭವ, ಇಂದಿನ ವಿಚಾರ, ಮುಂದಿನ ಕನಸು;
ಜೊತೆಗೆ ಸುದ್ಧಿ-ಸಮಾಚಾರ, ಸ್ವಲ್ಪ ಸಿನೆಮಾ, ಆಟ, ತಿರುಗಾಟ ಇತ್ಯಾದಿ;
ಎಲ್ಲಾ ಬರೆಯೋಣವೆಂದರೆ ... ಸಮಯವೇನೋ ಇದೆ
ಆದರೆ ಸಂಯಮದ ಕೊರತೆ.
ಬರೆಯದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ
ಕೆಲಸವೊಂದು ಅರ್ಧಕ್ಕೆ ನಿಂತಂತೆ.

ಅದಕ್ಕೊಂದು ಉಪಾಯ: ಬರವಣಿಗೆಯಲ್ಲಿ
ವಿಷಯವಿರಬೇಕು, ವರ್ಣನೆಯಿರಬಾರದು;
ವಿಚಾರವಿರಬೇಕು, ಹರಟೆಯಿರಬಾರದು;
ತಿರುಳಿರಬೇಕು, ವಿವರಗಳಿರಬಾರದು;
ವೈಶಿಷ್ಟ್ಯವಿರಬೇಕು, ವೈಚಿತ್ರ್ಯವಿರಬಾರದು;
ಭಾವನೆಗಳ ಸ್ಥೂಲ ರೂಪವಿರಬೇಕು, ಭಾವುಕತೆಯಿರಬಾರದು;

ಹೆಚ್ಚೆಂದರೆ ಹದಿನಾಲ್ಕು ಸಾಲಿರಬೇಕು, ಅದಕ್ಕಿಂತ ಹೆಚ್ಚಿರಬಾರದು;
ಇದೇ ಪುಟಾಣಿ ಬರಹ.